ಪಕ್ಷಾಘಾತ -
	ದೈಹಿಕ ಚಲನೆಯ ಬಲಗುಂದುವಿಕೆ ಇಲ್ಲವೇ ಪೂರ್ಣನಾಶ (ಪೆರಿಸಿಸ್, ಪೆರ್ಯಾಲಿಸಿಸ್). ಪಾಶ್ರ್ವವಾಯು, ಅರ್ಧಾಂಗವಾಯು, ಲಕ್ವ, ಜೋಗರಿಕೆ ಇವು ಪರ್ಯಾಯ ನಾಮಗಳು. ನರಮಂಡಲ ಹಾಗೂ ಸ್ನಾಯುಗಳ ಹೊಂದಾಣಿಕೆಯಿಂದ ದೈಹಿಕ ಚಲನೆ ಸಾಧ್ಯವಾಗಿದೆ. ಆದ್ದರಿಂದ ನರಮಂಡಲದ ಅಥವಾ ಸ್ನಾಯುಗಳ ರಚನೆಯಲ್ಲಿ ಇಲ್ಲವೇ ಕ್ರಿಯೆಯಲ್ಲಿ ಏರುಪೇರಾದಾಗ ಚಲನೆ ಬಲಗುಂದಿರುವುದು ಇಲ್ಲವೇ ಪೂರ್ಣವಾಗಿ ಲೋಪವಾಗಿರುವುದು ಸ್ವಾಭಾವಿಕ. ನರಮಂಡಲದಲ್ಲಿ ರೋಗ ಉದ್ಭವಿಸಿ ಐಚ್ಛಿಕ ಚಲನೆಯ ಸ್ವಾಧೀನ ಹಾಗೂ ಆ ಭಾಗಗಳಲ್ಲಿ ಸಾಮಾನ್ಯ ಸಂವೇದನೆಗಳ ಅನುಭವ ತಪ್ಪುವುದು ಸಾಧಾರಣ. ಇಂಥ ಸಂದರ್ಭಗಳಲ್ಲಿ ದೇಹದ ಅದೇ ಭಾಗಗಳ ಅನೈಚ್ಛಿಕ ಚಲನೆಗೆ ಕುಂದಿಲ್ಲದೆ ಇರುವುದೂ ಉಂಟು. ಹಾಗೆಯೇ ಅಲ್ಲಿ ಸ್ಪರ್ಶ, ಶೈತ್ಯೋಷ್ಣತೆ ಮತ್ತು ನೋವುಗಳ ಅನುಭವವೂ ಬದಲಾಗದೇ ಇರಬಹುದು. ಉನ್ಮಾದ ಪರಿಸ್ಥಿತಿಯಲ್ಲಿ (ಹಿಸ್ಟೀರಿಯಾ) ನರಮಂಡಲ ಅಥವಾ ಸ್ನಾಯುವಿನಲ್ಲಿ ರೋಗವೇ ಇರದೆ ಚಲನೆ ಹದ ತಪ್ಪಿರುತ್ತದೆ. ಆದರೆ ಅಪರೂಪ ಸಂದರ್ಭಗಳಲ್ಲಿ, ಉದಾಹರಣೆಗೆ ಡಿಸ್ಸೆಮಿನೇಟೆಡ್ ಸ್ಕೀರೋಸಿಸ್ ಎಂಬ ನರಮಂಡಲದ ರೋಗ ಸ್ಥಿತಿಯಲ್ಲಿ, ರೋಗದ ಪತ್ತೆ ಕಷ್ಟವಾಗಿದ್ದು ಅದು ಉನ್ಮಾದ ಪರಿಸ್ಥಿತಿಯಂತೆಯೇ ಕಂಡುಬರಬಹುದು. ದೇಹದ ಅನುಬಂಧಗಳ (ಕೈಕಾಲುಗಳ) ಪೈಕಿ ಯಾವುದೇ ಅನುಬಂಧದ ಚಲನನಾಶಕ್ಕೆ ಮಾನೋಪ್ಲೀಜಿಯ ಎಂದೂ ಎರಡು ಅನುಬಂಧಗಳ ಚಲನನಾಶಕ್ಕೆ ಡೈಪ್ಲೀಜಿಯ ಎಂದೂ ನಾಲ್ಕು ಅನುಬಂಧಗಳ ಸ್ವಾಧೀನ ತಪ್ಪಿರುವುದಕ್ಕೆ ಕ್ವಾಟ್ರಪ್ಲೀಜಿಯ ಎಂದೂ ಹೆಸರುಗಳಂಟು. ಚಲನನಾಶ ಎರಡು ಕಾಲುಗಳಿಗೆ ಮಾತ್ರ ಸೀಮಿತವಾಗಿದ್ದರೆ ಅದಕ್ಕೆ ಪ್ಯಾರಾಪ್ಲೀಜಿಯ ಎಂದು ಹೇಳುವುದೂ ಇದೆ. ದೇಹದ ಎಡಭಾಗ ಅಥವಾ ಬಲಭಾಗ ಪೂರ್ತಿ ಬಲಗುಂದಿದ್ದರೆ ಅಥವಾ ಅದನ್ನು ಚಲಿಸಲಾಗದಿದ್ದರೆ ಅದಕ್ಕೆ ಹೆಮಿಪೆರಿಸಿಸ್ ಹೆಮಿಪ್ಲೀಜಿಯ ಎನ್ನುತ್ತಾರೆ. ಈ ಸ್ಥಿತಿಯಲ್ಲಿ ಮುಖದ ಸ್ನಾಯುಗಳು ಕೂಡ ರೋಗಗ್ರಸ್ತ ಪಾಶ್ರ್ವದಲ್ಲಿ ನಿಶ್ಚಲವಾಗಿರಬಹುದು. ದೇಹದ ಅರ್ಧದ ಚಲನೆ ನಾಶವಾಗಿದ್ದಾಗ ಸಾಮಾನ್ಯವಾಗಿ ಮಾತು ನಿಂತುಹೋಗಿರುವುದೂ ಉಂಟು. ಆದರೆ ಅನತಿಕಾಲದಲ್ಲೇ ತೊದಲು ಮಾತನ್ನಾದರೂ ಆಡಲು ಸಾಧ್ಯವಾಗುವುದು. 

	ನರಮಂಡಲದ ನಿರ್ದಿಷ್ಟ ಭಾಗದಲ್ಲಿ ರಕ್ತದ ಕೊರೆತೆ ಉಂಟಾಗುವುದು ಪಾಶ್ರ್ವ ವಾಯುವಿಗೆ ಬಹುಸಾಮಾನ್ಯ ಕಾರಣ. ಅಭಿಧಮನಿಯಲ್ಲಿ ಕಂಡುಬಂದ ಅಡಚಣೆಯಿಂದ ಅಥವಾ ಅಭಿಧಮನಿ ಬಿರಿಯುವುದರಿಂದ ಇಂಥ ಕೊರತೆ ಸಂಭವಿಸುತ್ತದೆ. ಅಭಿಧಮನಿಯಲ್ಲಿ ಅಡಚಣೆಗೆ ಕಾರಣ ರಕ್ತ ಅಲ್ಲೇ ಗಡ್ಡೆ ಕಟ್ಟುವುದು, ಕೊಬ್ಬು ಜಾತಿಯ ಅಂಶಗಳು, ವಾಯುಗುಳ್ಳೆಗಳು, ನಾಳದ ಒಳಪದರ ದಪ್ಪವಾಗುವಿಕೆ ಇತ್ಯಾದಿ. ವ್ಯಕ್ತಿಯಲ್ಲಿ ರಕ್ತದ ಒತ್ತಡ ಅತಿಹೆಚ್ಚಾಗಿರುವಾಗ ಅಭಿಧಮನಿ ಬಿರಿಯುತ್ತದೆ. ಮಿದುಳಿನ ರಕ್ತನಾಳಗಳಲ್ಲಿ ಅಭಿಧಮನಿಯ ಪೆಡಸಣೆ ರೋಗದಿಂದ ಅದರ ಭಿತ್ತಿ ದುರ್ಬಲಗೊಂಡಿರುವುದು. ಇಂಥ ಸಂದರ್ಭಗಳಲ್ಲಿ ತಲೆಗೆ ಏಟು ಬಿದ್ದಾಗ, ಅಪರೂಪವಾಗಿ ತಾನಾಗಿಯೇ ಅಭಿಧಮನಿ ಒಡೆಯುವ ಸಂಭವವಿದೆ. ಹೀಗಾದಾಗ ಮಿದುಳಿನ ನಿರ್ದಿಷ್ಟಭಾಗಕ್ಕೆ ರಕ್ತಪೂರೈಕೆ ತಪ್ಪಿಹೋಗುತ್ತದೆ. ಅಲ್ಲದೇ ಆ ಸ್ಥಳದಲ್ಲಿ ರಕ್ತಸ್ರಾವವಾಗಿ ರಕ್ತ ಅಥವಾ ರಕ್ತಗರಣೆ ಶೇಖರಗೊಂಡು ನೆರೆಯ ನರಾಂಗಗಳನ್ನು ಅದುಮಿ ನಿಷ್ಕ್ರಿಯಗೊಳಿಸಬಹುದು. ಇಂಥ ಪ್ರಸಂಗಗಳಲ್ಲಿ ಕಂಡುಬರುವ ಲಕ್ಷಣಗಳು ರಕ್ತಸ್ರಾವವಾದ ಸ್ಥಳದ ಮೇಲೆ ಅವಲಂಬಿಸಿರುವುವಾದರೂ ಸಾಮಾನ್ಯವಾಗಿ ಮೊಂಡು ಆಯುಧದಿಂದ ಬಲವಾಗಿ ಹೊಡೆಯಲ್ಪಟ್ಟವನಂತೆ ಇದ್ದಕ್ಕಿದ್ದಂತೆ ಜ್ಞಾನ ತಪ್ಪಿ ಬೀಳುವುದು ಸಾಮಾನ್ಯ. ಆದ್ದರಿಂದ ಇದಕ್ಕೆ ಇಂಗ್ಲಿಷಿನಲ್ಲಿ ಸ್ಟ್ರೋಕ್ ಎಂದು ಹೆಸರಿದೆ. ಇದನ್ನೇ ರೂಢಿಯಲ್ಲಿ ಲಕ್ವ ಒಡೆದಿದೆ ಎಂದು ವಿವರಿಸುವುದಾಗಿದೆ. ಇದರಲ್ಲಿ ವ್ಯಕ್ತಿ ನಿಜವಾಗಿ ಪ್ರಜ್ಞೆ ಕಳೆದುಕೊಳ್ಳದೆ ಜೊಂಪು ಹತ್ತಿದವನಂತೆಯೂ ಇರಬಹುದು. ಮಿದುಳಿನ ಬಲಭಾಗದಲ್ಲಿ ಆಘಾತವಾದಾಗ ದೇಹದ ಬಲಭಾಗದ ಸ್ವಾಧೀನ ತಪ್ಪುವುದಲ್ಲದೆ ಮಾತೂ ನಿಂತುಹೋಗುವುದು ಸಾಮಾನ್ಯ. ಸ್ವಾಧೀನ ತಪ್ಪದ ಸ್ನಾಯುಗಳು ಅಶಕ್ತವಾಗಿರುತ್ತವೆ ಇಲ್ಲವೇ ಸೆಟೆದುಕೊಂಡಿರುತ್ತವೆ. ನೇರ ಉದ್ದೇಶಕಕ್ಕೆ ಅವು ಪ್ರತಿಕ್ರಿಯ ವ್ಯಕ್ತಪಡಿಸುವುದಿಲ್ಲ. ಮಲಮೂತ್ರಗಳನ್ನು ಹಿಡಿತದಲ್ಲುಟ್ಟಕೊಳ್ಳವುದೂ ವ್ಯಕ್ತಿಗೆ ಸಾಧ್ಯವಾಗದಿರಬಹುದು. ಕೆಲ ಕಾಲಾನಂತರ ಆಘಾತದ ತೀವ್ರತೆ ಕಡಿಮೆ ಆಗುತ್ತ ಬಂದು ಕೈ ಅರೆ ಮಡಿಸಿಕೊಂಡು ದೇಹದ ಕಡೆ ಮಾಲಿರುವುದೂ ಕಾಲು ನೇರವಾಗಿದ್ದು ಚಲಿಸಬಹುದಾಗಿದ್ದರೂ ವಿಶಿಷ್ಟ ನಡಿಗೆ ಇರುವುದೂ ಕಂಡುಬರುತ್ತವೆ. ಸಾಮಾನ್ಯವಾಗಿ ವಯಸ್ಸಾದ ವ್ಯಕ್ತಿಗಳಲ್ಲಿ ಮತ್ತು ಮಧುಮೇಹ ರೋಗದಿಂದ ನರಳುತ್ತಿರುವವರಲ್ಲಿ ಈ ರೀತಿಯ ಪಕ್ಷಘಾತ ಕಂಡು ಬರುವುದುಂಟು.

	ಹೆಪ್ಪುಗಟ್ಟಿದ ರಕ್ತದ ತುಣುಕು ರಕ್ತವಾಹಿನಿಯಲ್ಲಿ ತೇಲಿಬಂದು ಮಿದುಳಿನ ಯಾವುದೇ ಸಣ್ಣ ಅಭಿಧಮನಿಯಲ್ಲಿ ಮುಂದೆ ಹೋಗಲಾರದೆ ಸಿಕ್ಕಿಹಾಕಿಕೊಂಡು ಅದರಲ್ಲಿ ರಕ್ತ ಪ್ರವಾಹವನ್ನೇ ಬಂದು ಮಾಡಬಹುದು. ಇಂಥ ಸಂದರ್ಭದಲ್ಲೂ ಲಕ್ವ ಹೊಡೆಯುವ ಸಂಭವವಿರುವುದು ವೇದ್ಯ. ಹೃದ್ರೋಗಿಗಳಲ್ಲಿ ಈ ರೀತಿಯ ಪಕ್ಷಾಘಾತ ಸಾಮಾನ್ಯ. ಅಭಿಧಮನಿಯಲ್ಲಿ ರಕ್ತ ಸಾವಕಾಶವಾಗಿ ಹೆಪ್ಪುಗಟ್ಟುತ್ತ ಹೋಗಿ ಕೊನೆಗೆ ರಕ್ತಪ್ರವಾಹಕ್ಕೆಪೂರ್ಣ ಅಡ್ಡಿಮಾಡುವಂಥ ಸಂದರ್ಭಗಳಲ್ಲಿ ಪಕ್ಷಾಘಾತ ಸಂಭವಿಸಿದರೆ ಅದು ಕ್ರಮೇಣ ಕಂಡುಬರುತ್ತದೆ.

	ಮಿದುಳಿನ ಗಡ್ಡೆಗಳಲ್ಲಿ ನರಾಂಶಗಳ ಮೇಲಿನ ಒತ್ತಡದಿಂದಾಗಿ ಪಾಶ್ರ್ವಪಕ್ಷಾಘಾತ ಉಂಟಾಗುತ್ತದೆ. ಮಿದುಳಿನ ನಾಶವಾದ ಭಾಗ ದೇಹದ ಯಾವ ಯಾವ ಅವಯವಗಳ ಚಲನೆಯನ್ನು ನಿರ್ದೇಶಿಸುವುದೋ ಅವು ನಿಶ್ಚಲವಾಗುತ್ತವೆ. ಮಿದುಳು ರಕ್ತನಾಳಗಳ ಒಳ ಸುತ್ತಳತೆ ಸಣ್ಣಗಾಗುವಿಕೆ ಮತ್ತು ಮಿದುಳಿನ ಮೇಹ ರೋಗ ಹಾಗೂ ಕ್ಷಯರೋಗ ಇವುಗಳಲ್ಲಿಯೂ ಇಂಥ ಪಕ್ಷಾಘಾತ ಸಂಭವಿಸುವುದು.

	ಮಿದುಳು ಬಳ್ಳಿಯ ರೋಗಸ್ಥಿತಿಗಳಲ್ಲಿ (ರಕ್ತಸ್ರಾವ, ಗಡ್ಡೆಯ ಒತ್ತಡ, ಬೆನ್ನು ಮೂಳೆ ಮುರಿತ ಹಾಗೂ ಊನಗಳು, ಸೋಂಕು ಇತ್ಯಾದಿ) ಆಘಾತವಾದ ಜಾಗದ ಕೆಳಗಿನ ಭಾಗ ಸ್ವಾಧೀನ ತಪ್ಪುತ್ತದೆ. ಉದಾಹರಣೆಗೆ ಕುತ್ತಿಗೆಯ ಭಾಗದಲ್ಲಿ ಆಘಾತವಾದರೆ ಕೈಗಳಲ್ಲಿ ಜೋಗರಿಕೆ ಉಂಟಾಗಬಹುದು. ಸೊಂಟ ಭಾಗದಲ್ಲಾದರೆ ಎರಡು ಕಾಲುಗಳೂ ಜೋಗರಿಕೆಯ ಒಳಗಾಗುತ್ತವೆ. ಅಲ್ಲದೇ ಮೂತ್ರ ಹಾಗೂ ಮಲವಿಸರ್ಜನೆಯಲ್ಲಿಯೂ ತೊಂದರೆ ಆಗುತ್ತದೆ. ಜೋಗರಿಕೆಗೆ ಒಳಗಾದ ಸ್ನಾಯುಗಳು ಸಡಿಲಗೊಂಡು ಚಲನಸಾಮಥ್ರ್ಯವನ್ನು ಕಳೆದುಕೊಳ್ಳುತ್ತವೆ. ಸಂವೇದನ ಸಾಮಥ್ರ್ಯವೂ ನಾಶವಾಗಬಹುದು. ಕ್ಷಯ, ಮೇಹರೋಗ, ಪೋಲಿಯೊ, ಮೈಯಲೈಟಿಸ್ ಮುಂತಾದ ಸೋಂಕುಗಳಿಂದಲೂ ಮಿದುಳುಬಳ್ಳಿ ರೋಗ್ರಸ್ತವಾಗಿ ಈ ರೀತಿಯ ಪಕ್ಷಾಘಾತ ಕಂಡುಬರುತ್ತದೆ.

	ಪೋಲಿಯೊಮೈಯಲೈಟಿಸ್ ಕಾಯಿಲೆಯಲ್ಲಿ ಮಿದುಳುಬಳ್ಳಿಯ ಮುಂಗುಂಪಿನ (ಆ್ಯಂಟೀರಿಯರ್ ಹಾರ್ನ) ನರಕೋಶಗಳು ಅಥವಾ ಮಿದುಳಿನ ಹಿಂದಿನ ಚಾಚುಭಾಗ ವೈರಸುಗಳಿಂದ ನಾಶವಾಗುತ್ತವೆ. ಆಗ ಸಂವಾದೀ ದೇಹಭಾಗಗಳಲ್ಲಿ ಜೋಗರಿಕೆ ಉಂಟಾಗುತ್ತದೆ. ಕೈಕಾಲುಗಳಲ್ಲಿ ನಿಶ್ಚಲತೆ ಕಂಡುಬರುವುದು ಸಾಮಾನ್ಯ ಚಲನೆ ಕಳೆದುಕೊಂಡ ಸ್ನಾಯುಗಳು ಸವೆಯುತ್ತವೆ. ಹಾನಿ ತೀವ್ರವಾಗಿಲ್ಲದಿದ್ದರೆ ಜೋಗರಿಕೆ ತಾತ್ಕಾಲಿಕವಾಗಿದ್ದು ಒಂದು ಕಾಲು ಅಥವಾ ಕೈ ಮಾತ್ರ ಸ್ವಾಧೀನ ತಪ್ಪಿ ಇತರ ಅಂಗಗಳು ಪೂರ್ಣ ಚೇತರಿಸಿಕೊಳ್ಳುತ್ತವೆ. ಎದೆಗೂಡಿನ ಸ್ನಾಯುಗಳಿಗೆ ಜೋಗರಿಕೆ ಉಂಟಾದರೆ ಉಸಿರಾಟವೇ ನಿಂತುಹೋಗಬಹುದು. ಮಿದುಳಿನ ಚಾಚುಭಾಗದ ಅಂಶಗಳಿಗೆ ಧಕ್ಕೆತಟ್ಟಿದ್ದರೆ ಕಣ್ಣು, ಬಾಯಿ, ಗಂಟಲು, ಧ್ವನಿಸಂಪುಟ, ನಾಲಿಗೆ ಮುಂತಾದವುಗಳ ಸ್ನಾಯುಗಳಿಗೆ ಜೋಗರಿಕೆ ಉಂಟಾಗುತ್ತದೆ. ಇಂಥ ಸಮಯದಲ್ಲಿ ವ್ಯಕ್ತಿ ಪ್ರಜ್ಞಾಹೀನನಾಗಿ ಅಪಾಯ ಸ್ಥಿತಿಯಲ್ಲಿ ಇರುತ್ತಾನೆ.

	ಗಂಟಲುಮಾರಿ ರೋಗದಲ್ಲೂ (ಡಿಫ್ತೀರಿಯಾ) ರೋಗಾಣುಗಳಿಂದ ಉತ್ಪಾದಿಸಲ್ಪಡುವ ವಿಷಪದಾರ್ಥ ರಕ್ತದಲ್ಲಿ ಸಂಚರಿಸುತ್ತ ದೇಹದ ಭಾಗಗಳಲ್ಲಿ ಜೋಗರಿಕೆಯನ್ನು ಉಂಟುಮಾಡಬಹುದು. ಮುಖದ ನರ ಈ ವಿಷಕ್ಕೆ ಒಳಗಾಗಿದ್ದರೆ ಮುಖದ ಆ ಭಾಗದಲ್ಲಿ ಜೋಗರಿಕೆ ಕಂಡುಬರುತ್ತದೆ. ಸ್ನಾಯುಗಳು ಬಿಗಿದುಕೊಳ್ಳುವುದರಿಂದ ಮುಖಭಾವ ಜಡವಾಗುತ್ತದೆ. ವ್ಯಕ್ತಿ ಕಣ್ಣುಮುಚ್ಚಲಾರ. ಜೋಗರಿಕೆಗೆ ಈಡಾದ ತುಟಿಯ ಪಾಶ್ರ್ವದಿಂದ ವ್ಯಕ್ತಿ ಸೇವಿಸಿದದ್ರವ ಸೋರುತ್ತದೆ.

	ಮಂಡಲದಲ್ಲಿ ಯಾವ ಬದಲಾವಣೆಯೂ ಇಲ್ಲದೇ ಮೂಲತಃ ಸ್ನಾಯುಗಳಲ್ಲೇ ನಶಿಸುವಿಕೆ ಉಂಟಾದಾಗಲೂ ಜೋಗರಿಕೆ ತಲೆದೋರುವುದು ವ್ಯಕ್ತ. ಇದು ಕಂಡು ಬರುವ ವಂಶಪಾರಂಪರ್ಯವಾದ ಫೆಮಿಲಿಯಲ್ ಪೀರಿಯಾಡಿಕ್ ಪೆರ್ಯಾಲಿಸಿಸ್ ಎಂಬ ರೋಗಕ್ಕಾಗಲಿ ಮೈಯಸ್ತೀನಿಯಾ ಎಂಬ ರೋಗಕ್ಕಾಗಲೀ ಕಾರಣ ಸರಿಯಾಗಿ ತಿಳಿದಿಲ್ಲ. ಜೈವಿಕ ಕ್ರಿಯೆಗಳಲ್ಲಿ ಏರುಪೇರಾದಾಗಲೂ ಜೋಗರಿಕೆ ತಲೆದೋರುತ್ತದೆ. ಅಡ್ರಿನಲ್, ತೈರಾಯ್ಡ್ ಮುಂತಾದ ನಿರ್ನಾಳ ಗ್ರಂಥಿಗಳ ಕಾಯಿಲೆಗಳಲ್ಲಿ ಹೀಗಾಗುವುದು ಸಾಮಾನ್ಯ.

	ಕೆಲವು ವಿಷಗಳು ದೇಹದ ಎಲ್ಲ ಭಾಗಗಳಲ್ಲೂ ಸ್ವಾಧೀನನಾಶ ಮಾಡುತ್ತÀವೆ. ಹಾವಿನ ವಿಷ ಈ ರೀತಿಯದು. ಕ್ಲಾಸ್ಟ್ರೀಡಿಯಮ್ ಬಾಟ್ಯುಲಿನಮ್ ಎಂಬ ಸೂಕ್ಷ್ಮಾಣು ಕಲಬೆರಕೆಯ ಆಹಾರದಲ್ಲಿ ಸೇರಿ ವಿಷಪದಾರ್ಥವೊಂದನ್ನು ಸೃಷ್ಟಿಸುವುದರಿಂದ ಅದನ್ನು ಸೇವಿಸಿದ ವ್ಯಕ್ತಿಯ ದೇಹದಲ್ಲಿ ವಿಸ್ತøತ ಜೋಗರಿಕೆ ಉಂಟಾಗುತ್ತದೆ. ಮದ್ಯದ ಸೇವನೆ ಅತಿಯಾದಾಗ ವೈಮಿನ್ನಿನ ಅತೀವ ಕೊರತೆ ಆದಾಗ, ಜೈವಿಕಕ್ರಿಯೆಯ ಏರುಪೇರಾಗುತ್ತದೆ. ಪರಿಣಾಮವಾಗಿ ರಕ್ತದಲ್ಲಿ ವಿಷಪದಾರ್ಥಗಳು ಕಂಡುಬಂದು ವ್ಯಾಪಕವಾಗಿ ನರಗಳ ಉರಿತಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮ ಕೈಕಾಲುಗಳ ಜೋಗರಿಕೆ.

	ಹೀಗೆ ಪಕ್ಷಾಘಾತಕ್ಕೆ ನಾನಾ ಕಾರಣಗಳಿವೆ. ರೋಗದ ಮಾದರಿ ಹಾಗೂ ಲಕ್ಪ್ಷಣಗಳು ಆಯಾ ಸಂದರ್ಭಕ್ಕೆ ತಕ್ಕಂತೆ ಇರುತ್ತವೆ. ತೀವ್ರತಮ ಜೋಗರಿಕೆ ಪ್ರಾಣಾಪಾಯಕಾರಿ. ಮಿಕ್ಕವಕ್ಕೆ ಕಾರಣ ತಿಳಿದು ಅಗತ್ಯವಾದ ಚಿಕಿತ್ಸಾವಿಧಾನವನ್ನು ಅನುಸರಿಸಬೇಕು. ಸ್ನಾಯುಗಳು ಮತ್ತು ನರಗಳು ಕ್ರಮೇಣ ತಮ್ಮ ಕಾರ್ಯಗಳಲ್ಲಿ ಉದ್ಯುಕ್ತವಾಗುವಂತೆ ಪುನಸ್ಸಂಸ್ಥಾಪನ ಕಾರ್ಯವನ್ನು (ರಿಹ್ಯಾಬಿಲಿಟೇಷನ್) ಕೈಗೊಳ್ಳಬೇಕು. ಇದಕ್ಕಾಗಿ ಪ್ರಕೃತಿ ಚಿಕಿತ್ಸಾಕ್ರಮವನ್ನು (ಫಿಸಿಯೋತೆರಪಿ) ಅನುಸರಿಸತಕ್ಕದ್ದು. ಕೆಲವು ಪ್ರಕರಣಗಳಲ್ಲಿ ಪಕ್ಷಾಘಾತ ಚಿಕಿತ್ಸೆಗೆ ಮಣಿಯುತ್ತದೆ. ರಕ್ತದ ಒತ್ತಡ ಬಹಳ ಏರಿದ್ದು, ರಕ್ತಸ್ರಾವವಾಗದೆ ಪಕ್ಷಾಘಾತವಾಗಿದ್ದರೆ, ರಕ್ತದ ಒತ್ತಡವನ್ನು ಕಡಿಮೆ ಮಾಡಿದ ಒಡನೆಯೇ ಶೀಘ್ರಗುಣ ಕಂಡುಬರುತ್ತದೆ. ಬಹುಶಃ ವೈದ್ಯನಿಗೆ ಕೀರ್ತಿತರುವ ಪಕ್ಷಾಘಾತ ಚಿಕಿತ್ಸೆ ಇದೊಂದೇ ಎಂದು ತೋರುತ್ತದೆ. ಮಿಕ್ಕ ಸಂದರ್ಭಗಳಲ್ಲಿ ಚಿಕಿತ್ಸೆ ಎಷ್ಟೇ ಪರಿಣಾಮಕಾರಿ ಆಗಿದ್ದರೂ ವ್ಯಕ್ತಿಯ ಮೇಲೆ ಜೋಗರಿಕೆಯ ಕುರುಹು ಕಿಂಚಿತ್ತಾದರೂ ಉಳಿದೇ ಇರುವುದು ಸಾಮಾನ್ಯ.
(ಎ.ಎನ್.; ಎನ್.ಕೆ.ಸಿ.; ಕೆ.ಆರ್.ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ